ಓದು, ಬರೆಹ, ಲೆಕ್ಕ: ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಸಾಧಿಸಬೇಕೆಂದು ಪರಿಗಣಿತವಾಗಿದ್ದ ಮೂರು ಮೂಲಭೂತ ಕೌಶಲಗಳು (ದಿ ತ್ರಿ ಆರ್ಸ್‌). ಮಕ್ಕಳ ನಿತ್ಯಜೀವನಕ್ಕೆ ಓದುವುದು, ಬರೆಯುವುದು, ಲೆಕ್ಕಾಚಾರ-ಈ ಮೂರೇ ಸಾಕೆಂಬ ಶಿಕ್ಷಣದ ಸಂಕುಚಿತ ದೃಷ್ಟಿ ಈಚೆಗೆ ಮಾಯವಾಗುತ್ತಿದೆ. ಈ ಕೌಶಲಗಳು ಮುಂದಿನ ಸಾಧನೆಗೆ ಕೇವಲ ಉಪಕರಣಗಳು ಮಾತ್ರ; ಅವೇ ಶಿಕ್ಷಣವಲ್ಲ-ಎಂಬ ದೃಷ್ಟಿ ಬೆಳೆದಂತೆ ಪ್ರಾಥಮಿಕ ಶಾಲೆಯಲ್ಲಿ ಅವುಗಳ ಜೊತೆಗೆ ಸಾಹಿತ್ಯಾಭ್ಯಾಸ, ಸಮಾಜ ಪರಿಚಯ, ಸಾಮಾನ್ಯ ವಿಜ್ಞಾನ, ಶಾರೀರಿಕ ಶಿಕ್ಷಣ, ಕೈಕೆಲಸ ಇತ್ಯಾದಿಗಳೂ ಈಗ ವ್ಯಾಸಂಗಕ್ರಮದಲ್ಲಿ ಸೇರಿಕೊಂಡಿವೆ.

ಆದರೆ ಓದು, ಬರೆಹ, ಲೆಕ್ಕಗಳು ಎಲ್ಲ ವ್ಯಾಸಂಗದ ಅಡಿಪಾಯವೆನ್ನುವ ವಿಷಯದಲ್ಲಿ ಭಿನ್ನಾಭಿಪ್ರಾಯವಿಲ್ಲ. ಇವಿಷ್ಟನ್ನಂತೂ ವಿದ್ಯಾರ್ಥಿ ಕಡ್ಡಾಯವಾಗಿ, ಖಚಿತವಾಗಿ ತಿಳಿಯಬೇಕು. ಆದರೆ ಇವನ್ನು ಮೇಲೆ ಸೂಚಿಸಿದ ಇತರ ಶಾಸ್ತ್ರಗಳ ಮುಖೇನ ಕಲಿಸಿದಲ್ಲಿ ವ್ಯಾಸಂಗ ವಿಶಾಲವಾಗುತ್ತದೆ.	(ಎಂ.ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ